ಇಸ್ಫಹಾನ್
ಮಧ್ಯ ಇರಾನಿನಲ್ಲಿ ಟೆಹರಾನಿಗೆ 32 ಕಿ.ಮೀ. ದಕ್ಷಿಣಕ್ಕೂ ಷಿರಾeóï ನಗರಕ್ಕೆ 348 ಕಿ.ಮೀ. ಉತ್ತರಕ್ಕೂ ಇರುವ ಸುಂದರ ನಗರ. ಸಮುದ್ರ ಮಟ್ಟಕ್ಕೆ 3,500 ಎತ್ತರವಾಗಿರುವುದರಿಂದ ಬಹಳ ಹಿತಕರವಾದ ವಾಯುಗುಣವನ್ನು ಹೊಂದಿದೆ. ಜನಸಂಖ್ಯೆ 2,54,876 (1964). ಧಾರಾಳವಾಗಿ ನೀರು ಸರಬರಾಜು ಇರುವುದರಿಂದ ರಮ್ಯವಾದ ಉದ್ಯಾನಗಳನ್ನೂ ಫಲವತ್ತಾದ ಹೊಲಗದ್ದೆಗಳನ್ನೂ ಕಾಣಬಹುದು. ಜೈóನ್‍ದೇಹ್ (ಅರ್ಥ ಜೀವನದಿ) ನದಿ ಊರಿನ ಪಕ್ಕದಲ್ಲೇ ಹರಿಯುತ್ತದೆ. ಹಿಂದೆ, 1051 ರಿಂದ 1063ರವರೆಗೆ, 1072 ರಿಂದ 1092ರವರೆಗೆ 1590 ರಿಂದ 1722ರವರೆಗೆ ಪರ್ಷಿಯದ ರಾಜಧಾನಿಯಾಗಿತ್ತು. ಹದಿನೇಳನೆಯ ಶತಮಾನದಲ್ಲೇ ಜನಸಂಖ್ಯೆ ಸುಮಾರು ಆರು ಲಕ್ಷವಿತ್ತೆಂದು ತಿಳಿದುಬಂದಿದೆ. ನಗರದ ಮಧ್ಯದಲ್ಲಿ ಸುಲ್ತಾನ ಮೊದಲನೆಯ ಅಬ್ಬಾಸನ ಭವ್ಯ ಅರಮನೆ ಮತ್ತು ಸುಂದರವಾದ ಮಸೀದಿ ಇವೆ. ಇವು ಉನ್ನತಮಟ್ಟದ ಪಾರಸಿ ಕಲಾಕೌಶಲಕ್ಕೂ ವಾಸ್ತುಶಿಲ್ಪಕ್ಕೂ ನಿದರ್ಶನಗಳು, ಇಂಥ ಅನೇಕ ಸುಂದರ ಮಸೀದಿಗಳು ನಗರದ ಬೇರೆ ಕಡೆಗಳಲ್ಲೂ ಇವೆ. ತನ್ನ ಸೈನಿಕರಲ್ಲಿ ಕೆಲವರನ್ನು ಕೊಂದರೆಂಬ ಕಾರಣದಿಂದ ಚಂಗೇಸ್‍ಖಾನ್ ಮತ್ತು ತೈಮೂರ್ 1387 ರಲ್ಲಿ ಎಪ್ಪತ್ತು ಸಾವಿರ ಪರ್ಷಿಯನ್ ನಾಗರಿಕರನ್ನು ಕೊಲ್ಲಿಸಿದರು. 1723ರಲ್ಲಿ ಘಾಲ್ಸೈ ಆಪ್ಘನರು ಹದಿನಾಲ್ಕು ದಿನಗಳ ಕಾಲ ನಡೆಸಿದ ಸಾಮೂಹಿಕ ಕೊಲೆ ಇನ್ನೂ ಭೀಕರವಾಗಿತ್ತು. 1916ರಲ್ಲಿ ಈ ನಗರವನ್ನು ರಷ್ಯನರು ಸ್ವಲ್ಪಕಾಲ ಆಕ್ರಮಿಸಿದ್ದರು. ನಾನಾ ಬಣ್ಣಗಳಿಂದ ರಮ್ಯವಾಗಿ ಅಲಂಕೃತವಾದ ಮನೆಗಳು, ವಿಶಾಲವಾದ ಉಪ್ಪರಿಗೆ ಮೊಗಸಾಲೆಗಳು, ಸಾಲು ಮರಗಳು, ಹೂದೋಟಗಳು ಸುಂದರ ಕಮಾನು ಸೇತುವೆಗಳು-ಈಗ ಅಲ್ಲಲ್ಲೇ ಶಿಥಿಲವಾಗಿದ್ದರೂ - ನಗರಕ್ಕೆ ಆಕರ್ಷಕ ಮೆರುಗು ಕೊಟ್ಟಿವೆ. ಅನೇಕ ನೆಯ್ಗೆ ಕಾರ್ಖಾನೆಗಳಿವೆ. ಚಿನ್ನ, ಬೆಳ್ಳಿಯ ಸೂಕ್ಷ್ಮತಂತಿಯಿಂದ ಮಾಡುವ ತೆರೆಪುಚಿತ್ರ ಕೆಲಸಕ್ಕೂ ಲೋಹ ಪದಾರ್ಥಗಳ ತಯಾರಿಕೆಗೂ ನಗರ ಪ್ರಸಿದ್ಧಿ ಪಡೆದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ